ದಿನಚರಿ
ಸೂರ್ಯ ಹುಟ್ಟೇ ಇಲ್ಲವಿನ್ನೂ ಛಳಿಗಾಲದ ಮುಂಜಾವು
ಕಾಸಿಟ್ಟ ಕಾಫಿ ಹೀರಿ ಪತ್ರಿಕೆಯ ಮಡಚಿ ಮುದುರಿ
ಅಗ್ರಹಾರ ದಾಟಿ ನಡೆದು ಝಾನ್ಸಿ ರಸ್ತೆಯನ್ನೂ ಮೀರಿ
ರೇಲ್ವೇ ಸ್ಟೇಷನ್ ಸೇರಬೇಕವನು, ಅಲ್ಲಾಹು ಅಕ್ಬರ್ ಕೂಗುತಿರೆ
ಕಡೇ ಬೆಲ್ಲಾಗಿದೆ..ಜನರೆಲ್ಲ ಬಂದಾಗಿದೆ
ಹೊರಟು ನಿಂತಿದೆ ಐದು ಐವತ್ತರ ಪುಶ್-ಪುಲ್ಲು
ಕಡೇ ಬೋಗಿಯೇ ಗತಿಯಿವನಿಗೆ ಸೀಟಿಗೇನು ಕಷ್ಟವಲ್ಲ
ಎಂದಿನಂತೇ ಕ್ಯಾಂಟೀನ್ ಇಡ್ಲಿ ಹಬೆಯಾಡುತಿದೆ
ಬಿಸಿಯನ್ನದೂಟ ಹೊತ್ತ ಮೈಸೂರ್ ಟಾರ್ಪಾಲಿನ ಚೀಲವನು
ಪಟ್ಟಣದ ಶ್ರೀರಂಗನಂತೆ ತಲೆದಿಂಬಾಗಿಸಿಕೊಂಡು
ಕಾಲು ಚಾಚಿ ಸೀಟಿನುದ್ದಕೂ ಪಶ್ಚಿಮವಾಹಿನಿ ದಾಟುವ ಮೊದಲೇ
ಗೊರಕೆಯೊಡನೆ ನೆಮ್ಮದಿಯ ನಿದ್ದೆ...ಮಂಡ್ಯದವರೆಗೂ!
ಚಾಯ್ ಕಾಫಿ ಟೀ ವಡೇ ವಡೇ ಬಿಸಿ ಬಿಸಿ ಮದ್ದೂರ್ ವಡೇ
ಎಲ್ಲರಂತೆ ಎದ್ದು ಕಣ್ಣುಜ್ಜಿಕೊಂಡು
ಮದ್ದೂರಿನಲ್ಲಿಷ್ಟು ಹೊಟ್ಟೆಪೂಜೆ
ಕಟ್ಟಿಟ್ಟ ಬುತ್ತಿಯ ಮೊದಲ ಕಂತು
ಅರೆ! ಖಾಲಿಯಿದ್ದ ಸೀಟುಗಳೆಲ್ಲ ಭರ್ತಿ!
ಹನಕೆರೆ,ಚನ್ನಪಟ್ಟಣ,ರಾಮನಗರದ
ಹೊತ್ತಿಗೆ ತುಂಬಿದ ಬಸುರಿಯಂತಾಗುವುದು
ಸಂಧಿಯಲ್ಲೆಲ್ಲೋ ಹಸಿದ ಮಗುವಿನಳಲು
ಮುಂದಿನ ಮೂರು ಬೋಗಿಯಲ್ಲಿಷ್ಟು
ಜೂಜಾಡುವ ಜಾಯಮಾನದವರು
ಮಧ್ಯದರಲ್ಲಿ ನರೆತ ಕೂದಲಿನವರು
ಸಂಸಾರಸ್ಥರು, ವಿದ್ಯಾರ್ಥಿಗಳು
ಕಡೆ ಕಡೆಗೆ ಲಲ್ಲೆಗರೆಯುವ ಹೆಣ್ಣು ಮಕ್ಕಳು
ಡಬ್ಬಿಯಲ್ಲಿಷ್ಟು ಊಟಕ್ಕೆಂದು ಮೊಸರನ್ನ-ಉಪ್ಪಿನಕಾಯಿ-ಚಿತ್ರಾನ್ನ
ಹಿಂದೆ ಮುಂದೆ ಹಲ್ಕಿರಿಯುವ ಹದಿ ಹುಡುಗರು
ಸಾಲ ಪಡೆದ ಕೆಂಪು ಬಾಚಣಿಗೆ, ಕೊಳಕು ಕಿಂಡಿ ಹಲ್ಲು
ಸಣ್ಣ ಮಾತು ದೊಡ್ಡ ನಗು ಇಷ್ಟು ಹರಟೆ
ಇವನ ಗೇಲಿ ಅವಳ ಸಿಡುಕು, ಚಕ್ಕಲಿ-ಮುರುಕು
ಮೇಲೆ ಕೂತು ತೂಕಡಿಸುವವರಿಗೆ ಬಾರದ ನಿದ್ದೆಯ ಬೇಟೆ
ವಾಸನೆ ಮೂಲೆಯಲಿ ಟಿಕೇಟಿಲ್ಲದವರು, ಚಿಂದಿ-ಹರುಕು
ಹೆಜ್ಜಾಲ ದಾಟಿ ಬಿಡದಿ ಮುಟ್ಟಿತು, ತೂಕಡಿಸಿ
ಕಿಟಕಿಯ ಸರಳಿಗೆ ತಲೆ ಬಡಿಸಿಕೊಂಡು
ಎದ್ದು ಆಕಳಿಸಿ ಮೈ ಮುರಿದು ಕಣ್ಣಗಳಿಸಿದನೊಮ್ಮೆ
ಕಿಟಕಿಯಾಚೆಯ ಬದುಕು ನಾಗಾಲೋಟದಲಿ ಓಡುತಿದೆ
ಜ್ಞಾನಭಾರತಿ ದಾಟಿಯಾಯಿತು...ಶಿಳ್ಳೆ ಕೂಗಿದ್ದಾಯಿತು
ನಾಯಂಡಹಳ್ಳಿಯಾಗಮನ; ಸಾವರಿಸಿಕೊಂಡು ಇಳಿದು
ರೈಲನ್ನು ಹಗುರಗೊಳಿಸಿ ತಲೆಬಾಗಿಸಿ ಚೀಲವಿಡಿದು
ಸರಸರನೆ ಒಟ್ಟಾಗಿ ನಡೆದೇಬಿಡುವರು ಹಿಂದಿರುಗಿ ನೋಡದೆ!


10 ಅನಿಸಿಕೆಗಳು
Su some skrutha nin kavanagalu bahala sundaravagidhe. Trainina prayana vannu istu sogasagi baribaudhu antha nin kavana nodidhmele thilithu. Ninna kavanadha prayanavannu mundhuvarisu
MunJAne prayaana mugitu.... MusSanJe prayana ....Q 'nalli Nintu Train Bagilu tegada taKshana Olage nuGGi kutkondu "Friends" 'gella seat hidiyodu....seat KeldAvrigella 'barTare' anta helodu.... E musSanje prayanada baggenu baritiya???
Avinash : Thanks amga
TKu: nenapina garigaLanna kedariddeeya..khaMDitA bareetini kaNO! :)thanks for ur patience and comments!
ಸುಸಂಸ್ಕೃತ ಅವರೇ,
ನಿಮ್ಮ ಕವನ ನನ್ನ 'ದಿನಚರಿ'ಯ ನೆನಪುಗಳನ್ನು ಬಡಿದೆಬ್ಬಿಸಿತು. ನೀವು ಹೇಳಿದ ಹಾಗೆ ಚನ್ನಪಟ್ಟಣ, ರಾಮನಗರ ಬರುವ ಹೊತ್ತಿಗೆ ತುಂಬಿರುತ್ತಿದ್ದ ರೈಲಿನಲ್ಲಿ ನಿಂತು, ತೂಗಾಡಿ ಪಯಣಿಸಿದ ದಿನಗಳೆಷ್ಟೋ! ಮತ್ತೆ ಬೋಗಿಯ ಬಾಗಿಲಲ್ಲಿ ಕೂತಿದ್ದನ್ನು ಕಂಡ 'ಹಿತೈಷಿ'ಗಳು ಮನೆಗೆ ದೂರು ಮುಟ್ಟಿಸಿ, ಅಪ್ಪ/ಅಮ್ಮನ ಕೋಪ ಮುಗಿಲು ಮುಟ್ಟಿದ್ದೆಷ್ಟೋ!
ಬಹಳ ಸೊಗಸಾಗಿದೆ ನಿಮ್ಮ 'ಗೀಚು'. ಅನುಭಾವಿಗಳಿಗೆ ಬಹಳ ಆತ್ಮೀಯವೆನಿಸುತ್ಗದೆ.
ಅಭಿನಂದನೆಗಳು, ಹೀಗೆ ಬರೆಯುತ್ತಿರಿ.
ಶಾಮಲ
ಶಾಮಲ,
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ವಂದನೆಗಳು...ಆ ದಿನಚರಿಗಳು ಎಂದಿಗೂ ಅಚ್ಚಳಿಯದ ನೆನಪುಗಳು...ಆಗಾಗ ಬಂದು ನಿಮ್ಮನಿಸಿಕೆಯನ್ನೂ ಗೀಚಿ ಹೋಗಿ
chennagi bardidya,bere avra anubhava keli bardiddu ansuthe...yaaru sikkidru recent aagi :-)
sakkatagiii iruva Kavanagalu.
manasinaa aanTharaladalli iruva maThugalanna paddaThisiriiaagee baradidderaaa...
kavana ode tumba khushi aayetu.
praThiondu stanjanallu aartha barithavada samacharvannu tilisidderaaa....
kavana prati obbba prayanigana manasina aaLadalli iruva aase, bayake gallnnu aartha bhaddavagee tilisuttaee...!
Superrrr Susheel....!
Idee tara bareetha iree yendu aashisuttanee...
nimma aatmiya
Prashant..
Jun 29(4 days ago) ಪ್ರಿಯ ಸಂದೀಪರೇ,
ನಿಮ್ಮ ಕವನದ ಶೈಲಿ ಚೆನ್ನಾಗಿದೆ.
ಮೊದಲನೇ ಪಂಕ್ತಿಯಲ್ಲಿ ಓರ್ವ ವ್ಯಕ್ತಿಯಿಂದ ಶುರುವಾಗುವ ಕವಿತೆ, ನಂತರದಲ್ಲಿ ಅವನ ಕ್ರಿಯೆಗಳನ್ನೇ ಹೇಳುತ್ತಾ ಸಾಗುತ್ತದೆ. ಆದರೆ ಕೊನೆಯ ಪಂಕ್ತಿಯಲ್ಲಿ ಈ ವ್ಯಕ್ತಿಯ ಉಲ್ಲೇಖವಿಲ್ಲದೇ ಪ್ರಯಾಣಿಕರೆಲ್ಲರೂ ಇಳಿದು ಹೋದ ಘಟನೆಯಿದೆ. ಅದಕ್ಕೆ ಪೂರ್ವದಲ್ಲಿ ತೂಕಡಿಸಿ ಎದ್ದು ಮೈಮುರಿದು ಇಳಿಯಲು ತಯಾರಾದ ಆ ಮನುಷ್ಯನೆಲ್ಲಿ ಹೋದ?
ಇನ್ನೊಂದು ವಿಚಾರ: ನೀವು ಪ್ರಾಸಗಳಿಗೆ ವಿಪರೀತ ಗಮನವನ್ನೇಕೆ ಕೊಡುತ್ತೀರಿ? ಇದು ಕೆಲವುಕಡೆ ಕೃತಕವೆನ್ನಿಸುತ್ತದೆ.
"ಜ್ಞಾನಭಾರತಿ ದಾಟಿಯಾಯಿತು...ಶಿಳ್ಳೆ ಕೂಗಿದ್ದಾಯಿತು" ಇಲ್ಲಿರುವ ಪ್ರಾಸ ಅನವಶ್ಯಕವೆನ್ನಿಸುತ್ತದೆ.
"ಸಣ್ಣ ಮಾತು ದೊಡ್ಡ ನಗು ಇಷ್ಟು ಹರಟೆ
ಇವನ ಗೇಲಿ ಅವಳ ಸಿಡುಕು, ಚಕ್ಕಲಿ-ಮುರುಕು
ಮೇಲೆ ಕೂತು ತೂಕಡಿಸುವವರಿಗೆ ಬಾರದ ನಿದ್ದೆಯ ಬೇಟೆ
ವಾಸನೆ ಮೂಲೆಯಲಿ ಟಿಕೇಟಿಲ್ಲದವರು, ಚಿಂದಿ-ಹರುಕು"
ಈ ಪಂಕ್ತಿಯಲ್ಲಿ ಬಳಸಿರುವ ಅಂತ್ಯಪ್ರಾಸಕ್ಕೆ ಅಗತ್ಯವಾದ ಗೇಯತೆ ದೊರಕುವದಿಲ್ಲ. ಪ್ರಾಸ ಬದ್ಧವಾಗಿಯೇ ಬರೆಯಬೇಕೆಂದರೆ ನೀವು ನವೋದಯ ಶೈಲಿಯ ಕವಿತೆಗಳನ್ನೋದಬೇಕು. ಆದರೆ, ಇಲ್ಲಿ ಅಪೇಕ್ಷಣೀಯವಾಗುವ ಗೇಯತೆಯು ನಿಮ್ಮ ವಸ್ತುವನ್ನು ಸ್ವೀಕರಿಸುವದೇ? ಏಕೆಂದರೆ ಗೇಯತೆಯನ್ನೇ ಆಧಾರವಾಗಿಟ್ಟುಕೊಂಡು ಕವನ ರಚಿಸಿದ ನವೋದಯ ಕಾಲದ ಕವಿಗಳು ಇಂಥ ಹೊಸ ವಸ್ತುಗಳ ಪ್ರಯೋಗಗಳನ್ನು ಮಾಡಲಿಲ್ಲ.
ನಾನೇ ವೀಣೆ
ನೀನೇ ತಂತಿ
ಅವನೇ ವೈಣಿಕ
ಮಿಡಿದನೆನಲು
ರಸದ ಹೊನಲು
ಬಿಂದು ಬಿಂದು
ಸೇರಿಸಿಂದು
ನಾದ ರೂಪಕ.
(-ಕುವೆಂಪು)
ಇಲ್ಲಿರುವ ಪ್ರಾಸದ ಗತಿಯನ್ನು ಗಮನಿಸಿ. ವೈಣಿಕ ಎಂಬಲ್ಲಿಗೆ ಮುಗಿದ ಸಾಲು, ಮುಂದೆ ದೂರದಲ್ಲಿ ಬರುವ ರೂಪಕ ಎಂಬ ಸಾಲಿನ ಜೊತೆ ಗೇಯತೆಯನ್ನು ಸೃಷ್ಟಿಸುತ್ತದೆ.
ನವ್ಯರ ಕಾಲಕ್ಕೆ ಶುರುವಾದ ಈ ಪ್ರಯೋಗಶೀಲತೆಯು ಗೇಯತೆಯೆಂಬುದನ್ನು ಗೌಣವಾಗಿಸಿತು. ನೀವು ಉದಾಹರಣೆಗೆ ಲಂಕೇಶರ "ಅವ್ವ" ಕವಿತೆಯನ್ನೋದಬಹುದು.
ಪ್ರೀತಿಯಿಂದ,
ವಿವೇಕಾನಂದ
Susheel Sandeep Jun 29(4 days ago) ಮೊದಲಿಗೆ ನಿಮ್ಮ ಈ ಸುಧೀರ್ಘವಾದ ವಿಶ್ಲೇಷಣೆಗೆ ನನ್ನ ಅನಂತಾನಂತ ವಂದನೆಗಳು...
ಪ್ರಾಸಕ್ಕೆ ಗಮನ ಕೊಟ್ಟಿದ್ಡೇನನ್ನೋದು ನಿಜವೇ...ಆದ್ರೆ ಅದು ಕೃತಕವೆನಿಸಬಹುದು ಅಂತ ನನಗೆ ಅನ್ನಿಸಲೇ ಇಲ್ಲ...ಈ ವಿಷಯವನ್ನ ಇನ್ನು ಮುಂದೆ ಮನದಟ್ಟು ಮಾಡ್ಕೊತೀನಿ...ಹಾಗೇ ನೀವು ಹೇಳಿದಂತೆ ನವೋದಯ ಕವಿತೆಗಳನ್ನು ಓದ್ಬೇಕು ಸರೀಗೆ...
"ಜ್ಞಾನಭಾರತಿ ದಾಟಿಯಾಯಿತು...ಶಿಳ್ಳೆ ಕೂಗಿದ್ದಾಯಿತು" ಇಲ್ಲಿರುವ ಪ್ರಾಸ ಅನವಶ್ಯಕವೆನ್ನಿಸುತ್ತದೆ - ಇದು ಪ್ರಾಸಕ್ಕಾಗಿ ಬರೆದದ್ದಲ್ಲ...ನನ್ನ ಸಾಧಾರಣ ಬರವಣಿಗೆಯ ಶೈಲಿಯಲ್ಲಿ ಇತ್ತ ಗದ್ಯವೂ ಅಲ್ಲದ ಅತ್ತ ಪದ್ಯವೂ ಅಲ್ಲದ ಕಾವ್ಯೆ ಕೃಷಿ ನನ್ನದು.ಹಾಗೆ ಬರೀವಾಗ ಅಂತ್ಯ ಪ್ರಾಸ ತೂರಿಬಂದಿರೋದು ಸಜವೇ ಹೊರತು ಈ ರೀತಿಯ ಪ್ರಾಸ ಡೆಲಿಬರೇಟ್ ಅಲ್ಲ.
ಇನ್ನು ಕವನದ ಆದಿಯಲ್ಲಿರುವಾತನೊಬ್ಬನ ದಿನಚರಿಯ ಬಗ್ಗೆ ನಾ ಬರೆಯಲು ಹೋಗಿಲ್ಲ..ಪ್ರತಿಯೊಬ್ಬರ ದಿನಚರಿಯೂ ಅವನಂತೆ ಶುರುವಾಗಿ ಎಲ್ಲರೊಡನೆ ಅವನೂ ಲೀನವಾಗಿಬಿಡ್ತಾನೆ ಅನ್ನೋದು ಮೂಲ ಉದ್ದೇಶ!
ನಿಮ್ಮಂಥವರ ಪ್ರತಿಕ್ರಿಯೆ ನಮ್ಮೆಲ್ಲರಿಗೂ ಖಂಡಿತಾ ಬೇಕು...ಹೀಗೇ ಸತ್ಕಾರ್ಯ ಮುಂದುವರೆಸಿ... delete
Srikanth Jun 29(4 days ago) @ Susan:
ನಿಮ್ಮ ಪದ್ಯ ಮಜವಾಗಿದೆ. ಎಲ್ಲರೂ ನೋಡಿರಬಹುದಾದ, ಆದರೆ ಗಮನಿಸಿರಲಾರದ keen sense of observations and attention to detail ಇದೆ ನಿಮ್ಮ ಪದ್ಯದಲ್ಲಿ.
ಇನ್ನು ಕವನದ ಶೈಲಿ etc. ವಿವೇಕ ಅವರು ಆಗಲೇ quite an exhaustive feedback ಕೊಟ್ಟಿದ್ದಾರೆ.
Surekha Jun 29(4 days ago) ಶೈಲಿ ಚೆನ್ನಾಗಿದೆ...ಒಳ್ಳೆಯ ಪದ್ಯ
Vivekanand Jun 29(4 days ago) ಪ್ರಿಯ ಸಂದೀಪರೇ,
ಪ್ರಾಸಗಳ ಬಗ್ಗೆ ನಿಜವಾಗಿಯೂ ನೀವು ಅವಜ್ಞೆ ತಳೆದಿದ್ದರೆ, ನಿಜವಾಗಿಯೂ ನಿಮ್ಮ ಶೈಲಿಯಲ್ಲಿ ಕಾವ್ಯಾತ್ಮಕ ಗುಣವಿದೆಯೆಂದೇ ಅರ್ಥ. ನಾನು ನಿಮ್ಮ ಮೊದಲಿನ ಕೃತಿಗಳನ್ನು ಓದಿಲ್ಲವಾದ್ದರಿಂದ ಈ ವಿಷಯ ತಿಳಿಯಲಿಲ್ಲ.
ಇನ್ನು ಪದ್ಯದಲ್ಲಿ ಬಂದಿರುವ ಓರ್ವವ್ಯಕ್ತಿಯ citation ಅನೇಕ ಪಂಕ್ತಿಗಳಲ್ಲಿ ಕಂಡಿದೆ. ನಸುಕಿನಲ್ಲಿ ಕಾಫಿಯನ್ನು ಕುಡಿದು ಪತ್ರಿಕೆಯನ್ನು ಹಿಡಿದು ತುಸುದೂರದಿಂಲೇ ಬಂದು ಕೊಂಚ ತಡವಾದಂತೆನ್ನಿಸಿ ಕೊನೆಯ ಬೋಗಿಯನ್ನು ಹಿಡಿಯುವದು; ಬಿಡದಿಯ ಹತ್ತಿರ ತೂಕಡಿಸಿ ಏಳುವದು ಇತ್ಯಾದಿ. ಒಟ್ಟಾರೆ ಜನರ ದಿನಚರಿಯನ್ನು ಚಿತ್ರಿಸುವ ಆಶಯವಿದ್ದ ಪಕ್ಷದಲ್ಲಿ ನೀವು ಈ ಮನುಷ್ಯನನ್ನೇಕೆ cite ಮಾಡುತ್ತೀರಿ? ಇವನನ್ನು ಬಿಟ್ಟೂ ನಿಮ್ಮ ಆಶಯ ವ್ಯಕ್ತ ಪಡಿಸಬಹುದಾಗಿತ್ತು.
ಆದರೆ ಇದಕ್ಕಿಂತಲೂ ಕಾವ್ಯಾತ್ಮಕ ಅಂಓವೊಂದಿದೆ ನಿಮ್ಮ ಕವಿತೆಯಲ್ಲಿ. ನೀವು ಈ ಮನುಷ್ಯನ ಜೊತೆಗೇ ಚಿತ್ರಿಸಿರುವ ಪರಿಸರ ಹಾಗೂ ವಿದ್ಯಮಾನಗಳೆಲ್ಲ ನೀವು ಕಂಡು ಬರೆದ ಸಾಲುಗಳಾಗಿರದೇ, ಆ ಮನುಷ್ಯನೇ ನೋಡಿ ಅನುಭವಿಸಿದಂತಿವೆ. ರೈಲು ಬಸುರಿಯಂತಾಗುವದು, ರೈಲಿನಲ್ಲಿ ಬಗೆಬಗೆಯ ಜನರಿರುವದು, ನಡೆಯುವ ಹರಟೆ, ಕೀಟಲೆ, ಇತ್ಯಾದಿ.
ಆದಕಾರಣ, ನೀವು ಮುಕ್ತಾಯದಲ್ಲಿ ಇವೆಲ್ಲವನ್ನೂ ಒಟ್ಟಿಗೆ assimilate ಮಾಡಿದ್ದರೆ ಕವನದ ಧ್ವನಿ ಇನ್ನೂ ಪಕ್ವವಾಗುತ್ತಿತ್ತು ಎಂಬುದೇ ನನ್ನ ಆಶಯ. ಅಂದರೆ ಈ ಮನುಷ್ಯನನ್ನೂ ನಾಯಂಡಹಳ್ಳಿಯಲ್ಲಿಯೇ ಇತರರೊಡನೆ ಇಳಿಸಿಬಿಡಿ, ಇಲ್ಲವೇ ಇತರರು ಇಳಿದುದನ್ನು ನೋಡಿದ ಇವನ ಭಾವನೆಯನ್ನಾದರೂ ಜೋಡಿಸಿ.
ಪ್ರೀತಿಯಿಂದ,
ವಿವೇಕಾನಂದ
Susheel Sandeep Jun 30(3 days ago) @ಶ್ರೀಕಾಂತ್ & ಸುರೇಖ : ಮೆಚ್ಚುಗೆಯ ನುಡಿಗಳಿಗೆ ವಂದನೆಗಳು (ವಿವೇಕಾನಂದರಿಗೆ ಈ ಕಮ್ಯೂನಿಟಿಯ ಲಿಂಕ್ ಕೊಟ್ಟಿದ್ದಕ್ಕೆ ಶ್ರೀ ನಿನಗೆ ಇನ್ನೊಂದು ಥ್ಯಾಂಕ್ಸ್! :))
@ವಿವೇಕಾನಂದ:
ಈ ಕವನವನ್ನ ಮತ್ತೆ ಮತ್ತೆ ಓದಿ ಪುನರಾವಲೋಕಿಸೋದಕ್ಕೆ ನಿಮ್ಮ ಮಾತುಗಳು ಪೂರಕವಾದವು...ನನ್ನ ಈ ಕವನದ ಉದ್ದೇಶ-ಹುಟ್ಟು-ಬೆಳವಣಿಗೆ-ಗತಿಯನ್ನ ನಾ ಈ ರೀತಿಯಾಗಿ ಬರೆದಿದ್ದೇನಷ್ಟೆ,
ಒಬ್ಬನ ದಿನಚರಿ ಹೀಗೆ ಪ್ರಾರಂಭವಾಗಿ (ಸಿಂಬಾಲಿಕ್ ರೆಪ್ರಸೆಂಟೇಶನ್ನಿಗಾಗಿ ಅವನು) "ಎಲ್ಲರಂತೆ ಎದ್ದು ಕಣ್ಣುಜ್ಜಿಕೊಂಡು ;ಮದ್ದೂರಿನಲ್ಲಿಷ್ಟು ಹೊಟ್ಟೆಪೂಜೆ" ಈ ಸಾಲಿಗೆ ಬರುವ ಹೊತ್ತಿಗೆ ಎಷ್ಟೋ ಜನರ ಮಧ್ಯೆ ಅವನೂ ಒಬ್ಬ ಪಯಣಿಗನಾಗ್ತಾನೆ...."ಕಿಟಕಿಯ ಸರಳಿಗೆ ತಲೆ ಬಡಿಸಿಕೊಂಡು;ಎದ್ದು ಆಕಳಿಸಿ ಮೈ ಮುರಿದು ಕಣ್ಣಗಳಿಸಿದನೊಮ್ಮೆ" ಅನ್ನೋದು ಅಷ್ಟೆಲ್ಲ ಜನರ ಮಧ್ಯೆ ಅವನ ಇರುವಿಕೆಗೆ ಒಂದು ರೆಮೈಂಡರ್ ಅಷ್ಟೇ...ಕಡೆಗೆ ಅವನೂ ಎಲ್ಲರಲಿ ಒಂದಾಗಿ ಆ ಪಯಣಿಗರ ಗುಂಪಲ್ಲಿ ಲೀನವಾಗಿ ಕರಗಿ ಹೋಗ್ತಾನೆ ಅಷ್ಟೇ...
ಇದು ಒಬ್ಬಿಬ್ಬ್ರರಿಗೆ ಮಾತ್ರವೀ ಅನ್ವಯಿಸಬಹುದಾದ ದಿನಚರಿಯಲ್ಲವಾದ್ದರಿಂದ ಹಾಗೂ ಎಲ್ಲರ ದಿನಚರಿಯೂ ಇವನಂತೆಯೇ ಇರಬಹುದು ಅನ್ನೋ ಊಹೆಯೊಂದಿಗೆ ಹುಟ್ಟಿ ಕರಗುವ ಪಾತ್ರ! ನಾಯಂಡಹಳ್ಳಿಯಲ್ಲಿ ಅಷ್ಟೂ ಜನರ ಮಧ್ಯೆ ಇವನೂ ಒಬ್ಬ ...ಆದ್ರೆ ಅದು ಎಲ್ಲರಿಗೂ ಗೋಚರಿಸದೇ ಇರಬಹುದು... :(
ಇಷ್ಟೆಲ್ಲ ಚಿಂತನೆಗಳಿಗೆ ಆಸ್ಪದ ಮಾಡಿಕೊಟ್ಟಿದ್ದಕ್ಕೆ ಮಗದೊಮ್ಮೆ ವಂದನೆಗಳು
ಈ ಪೋಸ್ಟ್ ಲೇಖಕರಿಂದ ತೆಗೆದುಹಾಕಲ್ಪಟ್ಟಿದೆ.
ಒಳ್ಳೇ ಕಾವ್ಯ ಕೃಷಿ.. ಒಳ್ಳೇ ವಿಮರ್ಶೆಗೆ ಒಳ್ಳೇ ಉತ್ತರ ಕೂಡ ಸುಶೀಲ್...
ಒಂದು ಕಮೆಂಟನ್ನು ಪೋಸ್ಟ್ ಮಾಡಿ
ಒಡನಾಡಿ ಕೊಂಡಿಗಳು
ಲಿಂಕ್ ರಚಿಸಿ