ದೂರದ ದಿಗಂತದೆಡೆಗೆ ನೆಟ್ಟ ದೃಷ್ಟಿ
ನೀಲಾಗಸದಲ್ಲೆಲ್ಲೋ ತಲೆ ಸುತ್ತುವವರೆಗೂ
ಗಿರಗಿಟ್ಲೆಯಂತೆ ಸುತ್ತು ಹೊಡೆವ ಒಂಟಿ ಹದ್ದು...
ಕಾ...ಕಾ... ಎಂಬ ಕರ್ಕಶ ದನಿ
ಕಾಗೆ ಹಿಂಡು
ಎಲ್ಲೋ ಹೆಗ್ಗಣವೊಂದು ಸತ್ತಿರಬೇಕಷ್ಟೆ!
ಚಿತ್ರ-ವಿಚಿತ್ರ ಪೋಸ್ಟರ್ ಮೆತ್ತಿದ
ಪೆಟ್ಟಿಗೆಯಂಗಡಿಯಲಿ
ಸೀಮೆ ಎಣ್ಣೆ ಸೋರುತ್ತಿರುವ ಪಂಪ್‍ಸ್ಟವ್ವು
ತ್ರೇತಾಯುಗದ ಕಂದು ಬಣ್ಣದ ಸೋಸು ಬಟ್ಟೆಯಲಿ
ಶತಮಾನ ಕಳೆದ ಚಾ ಎಲೆಗಳು
ಕುದಿಸಿದಷ್ಟೂ ಆವಿಯಾಗದ ನೀರು ಹಾಲು!
ಇಂದೇಕೋ ಕಾಣೆ...
ಈ ದೃಶ್ಯಾವಳಿಗಳು ದೇಜಾ-ವೂನಂತೆ
ಮತ್ತೆ ಮತ್ತೆ ಮರುಕಳಿಸಿ
ನನ್ನ ಮನಸ್ಥಿತಿಯ
ಮೂಕ ಚಿತ್ರವಾಗಿ
ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆಯಲ್ಲ!