ಗುರುವಾರ, ಏಪ್ರಿಲ್ 6, 2006

ಮತ್ಸರ [06Apr06]

ಹಾದಿ-ಬೀದಿಯಲಿ ಅಲೆದಾಡುವ ನಾಯಿ-ಬೆಕ್ಕು ಪೋಲಿ ದನಗಳು ಹಾರಿ ಹರಿದಾಡುವ ಕಾಗೆ-ಗುಬ್ಬಿ, ಹುಳ-ಹುಪ್ಪಟೆಗಳ ಕಂಡು ಮತ್ಸರಿಸುವುದೇಕೋ ಮನವು? ಎಷ್ಟು ಚೆನ್ನ ಅವುಗಳ ಜೀವನ ಹೇಳುವವರಿಲ್ಲ ಕೇಳುವವರಿಲ್ಲ ಓದು-ಕಲಿಕೆಯ ಹೇರಿಕೆಯಿಲ್ಲ ಮನೆ-ಮಠ, ಆಸ್ತಿ-ಪಾಸ್ತಿಯ ನೊಗಭಾರವಿಲ್ಲ ಧಾರ್ಮಿಕ-ದೈವಿಕ, ವೈಚಾರಿಕ-ಪ್ರಾಪಂಚಿಕ ಜವಾಬ್ದಾರಿಗಳಿಲ್ಲ ಇಹ-ಪರ, ಸತ್ಯಾಸತ್ಯತೆಗಳ ಚಿಂತೆಯಿಲ್ಲ ತಿಂದುಂಡು ಅಲೆದಾಡಿದರಷ್ಟಾಯ್ತು ಹೊತ್ತೊತ್ತಿಗಷ್ಟಷ್ಟು ಅಲ್ಲಲ್ಲಿ ಯಾರೋ ಕೊಟ್ಟ ಬಾಳೆ-ಬನ್ನು-ಹಾಲು ಎಲ್ಲೋ ಸಿಕ್ಕ ಅನ್ನ-ನೀರಲಿ ಪಾಲು ಮಕ್ಕಳು-ಮರಿ-ಮೊಮ್ಮಕ್ಕಳಿಗಷ್ಟು ಚಿನ್ನ-ಬಣ್ಣ-ಸೈಟುಗಳ ಮಾಡಬೇಕಿಲ್ಲ ಇರುವುದಕ್ಕಂದವಾದ ಅರಮನೆಯೂ ಬೇಕಿಲ್ಲ ಮಡಿ-ಮೈಲಿಗೆಗಳ ಜ್ಞಾನವೂ ಅವಕ್ಕಿಲ್ಲ ತಾವಾಯ್ತು ತಮ್ಮ ಪಾಡಾಯ್ತು ದಿನ ಮುಗಿದೊಡೆ ಒಡೆಯನಿಗೆ ಲೆಕ್ಕ ಕೊಡುವುದೂ ಬೇಕಿಲ್ಲ ಇದ್ದುದರಲೇ ಸ್ವರ್ಗ ಸುಖವನುಂಡು ನಾಳಿನ ಚಿಂತೆಯ ಹೊದಿಕೆಯಿಲ್ಲದೆ ನಿರಾಡಂಬರದಿಂದ ಮಲಗಿ ನಿದ್ರಿಸುವುದು ಎಷ್ಟು ಚೆನ್ನ?