ನೀವು ನೋಡಬಯಸುವ ಪುಟವು ಈಗ ಇಲ್ಲಿ ಲಭ್ಯವಿದೆ:
ಕಾವ್ಯ-ಕೃಷಿ
ಅಡಚಣೆಗಾಗಿ ಕ್ಷಮಿಸಿ.
The content you are looking for is now available on:
ಕಾವ್ಯ-ಕೃಷಿ
Sorry for the inconvenience.
ಸೋಮವಾರ, ಜುಲೈ 3, 2006
ಹಳ್ಳಿ ನೆನಪು
ಹಳೆಯ ತೊಟ್ಟಿ ಮನೆ-
ಹೆಂಚುಗಳ ಸೀಳಿ ಸದ್ದಿಲ್ಲದೇ
ಒಳ ಬಂದ ಎಳೆ ಸೂರ್ಯನ
ಬಿಸಿಲ್ಗೋಲುಗಳ ನಡು-ನಡುವೆ
ಹೆಜ್ಜೆ ಸಪ್ಪಳ ಕೇಳದಂತೆ
ಮಡಿಕೋಲ ಹಿಂದಿನಿಂದ
ಬಾಲಮುದುಡಿ ಒಳಬಂದ
ಕದ್ದು ಹಾಲ ಕುಡಿವ ಮುದ್ದಿನ ಬೆಕ್ಕು
ಅಲ್ಲಲ್ಲಿ ಅಷ್ಟಿಷ್ಟು ಹರಡಿ ಹೋಗಿದ್ದ
ಅಕ್ಕಿ-ಗೋಧಿ ಕಾಳುಗಳ
ಹೆಕ್ಕಿ ಹೆಕ್ಕಿ ಹೊಟ್ಟೆ ತುಂಬಿಸಿಕೊಳ್ಳುವ
ಆ ಗುಬ್ಬಿ ಮರಿಗಳ ಹಿಂಡು!
ಗಂಗೆ-ಗೌರಿ, ಜೊತೆಗೆ
ಗದ್ದೆಯೊಡೆಯ ಬಸವ
ಮಿಕ್ಕ ಮುದ್ದೆಯುಣುವ ಚೆನ್ನ
ಪಕ್ಕ ರಾತ್ರಿ ಕಳೆವ ಮೋತಿ
ಅರಳೀಕಟ್ಟೆ-ಆಂಜನೇಯನ ಗುಡಿ
ಹೈಕಳಿಗಾಗಿ ಇದ್ದ ಸರ್ಕಾರಿ ಶಾಲೆ
ದಿನಕ್ಕೊಮ್ಮೆಯಂತೆ ದಿಬ್ಬವೇರಿ ಬರುತ್ತಿದ್ದ
ಧೂಳೆಬ್ಬಿಸುವ ಶಿವನಾಮದ ಬಸ್ಸು
ಬೇಲಿಸಂದಿಯ ಓತಿಕ್ಯಾತ
ಸುತ್ತಲೂ ಹರಡಿದ ಗುಲಗಂಜಿ ಗಿಡ
ಮಾವು-ಹಲಸು-ಬಾಳೆ-ಸೀಬೆ
ಬೇಲದ ಹಣ್ಣಿನೊಡನೆ ಬೆಲ್ಲದ ಸವಿ
ಕೊನೆಯೇ ಇಲ್ಲದ ಆ ಹಳ್ಳಿ ನೆನಪುಗಳು
ದಿನವೂ ಮನದ ಏರಿ ಮೇಲೆ
ಬಸ್ಸಿನಂತೆಯೇ ಧೂಳೆಬ್ಬಿಸುತಿರುವುದು
ಹಿಂದಿರುಗಲಾರದ ಆ ಸವಿದಿನಗಳ ಅಣಕವೇನೋ!