ಸೋಮವಾರ, ಏಪ್ರಿಲ್ 30, 2007

ಪ್ರಶ್ನೆ - '?'

ನಾನೇಕೆ ಬರೆಯಬೇಕು? ನಾನೇಕೆ ಕವಿಯಾಗಬೇಕು? ಕೋಣೆಯ ಮೂಲೆಯಲಿ ಹಾಸಿದ ಹಾಸಿಗೆಯೊಂದು ಮನಸಿನ ಮೂಲೆಯಲ್ಲಿ ಹರಡಿದ ನೂರು ಯೋಚನೆಗಳು ಮುಚ್ಚಿದ ಕದ, ಅರೆತೆರೆದ ಕಿಟಕಿ, ಅರ್ಧ ಬಾಟಲಿ ನೀರು ಸುಂಯ್‍ಗುಟ್ಟು ತೀಡುವ ತಂಗಾಳಿಗೆ ಮೈಯೊಡ್ಡಿ ಹಾರಾಡುತ ಮೊಗವ ಸವರುವ ಈ ನೀಲಿ ಪರದೆ ಕಣ್ಮುಚ್ಚಿ ಕಾದಾಡಿದರೂ ನಿದಿರೆ ಬಾರದೆ... ಗೋಡೆಯಲಿ ನೆಲೆಬಿಟ್ಟ ತಾತ ತಂದ ಗಡಿಯಾರ ತೂಗುಬಿದ್ದ ಕ್ಯಾಲೆಂಡರ್, ವಾಲ್‍ಪ್ಲೇಟುಗಳು ಹಿಂದೆ ಹಲ್ಲಿ ಜೇಡಗಳ ಹೆಜ್ಜೆ ಗುರುತು ಕಿಟಕಿಯಾಚೆಗಿನ ತೆಂಗಿನ ಮರದಲಿ ಗರಿಗಳ ನಲ್ಮೆಯ ಪಿಸುಮಾತು ಚದುರಿದ ಮೋಡಗಳ ನಡು ನಡುವೆ ಕಣ್ಣಾ-ಮುಚ್ಚಾಲೆಯಾಡುವ ತುಂಟ ಚಂದಿರ; ಮಿನುಗುವ ತಾರೆಗಳು ಎಲ್ಲೋ ದೂರದಲ್ಲಿ ಹರಿವ ನೀರಿನ ಜುಳುಜುಳು ಸದ್ದು ಚರಂಡಿಯಾದ್ದರಿಂದಲೋ ಏನೋ ದುರ್ವಾಸನೆಯ ಘಮಲು ಕಿವಿದುಂಬಿ ಗುಂಯ್‍ಗುಡುವ ರಕ್ತಪಿಪಾಸಿ ಸೊಳ್ಳೆಗಳು ಕೇಳುತ ಗುನುಗುನಿಸುವಂತೆ ಮಾಡುವ ಹತ್ತು ಹಲವಾರು ಸ್ಟೇಶನ್ನುಗಳ ರೇಡಿಯೋ ಹಾಡುಗಳು ಎಡೆಬಿಡದೆ ಬರುವ ಯೋಚನೆಗಳಿಗೆ ಇವು ಜಾಹೀರಾತುಗಳು ಇಷ್ಟೆಲ್ಲವೂ ಕವನಕ್ಕೆ ಸ್ಫೂರ್ತಿಯಾಗುವ ವಸ್ತುವಾಗುವಾಗ, ವಸ್ತು-ವಿಷಯ-ವಸ್ತುಸ್ಥಿತಿಗಳೂ ಪ್ರೇರಣೆಯಾಗಿ ಕಣ್ಮುಂದಿರುವಾಗ, ನಾನೇಕೆ ಬರೆಯಬಾರದು? ಹೌದು... ನಾನೇಕೆ ಕವಿಯಾಗಬಾರದು??...