ನೀವು ನೋಡಬಯಸುವ ಪುಟವು ಈಗ ಇಲ್ಲಿ ಲಭ್ಯವಿದೆ:
ಕಾವ್ಯ-ಕೃಷಿ
ಅಡಚಣೆಗಾಗಿ ಕ್ಷಮಿಸಿ.
The content you are looking for is now available on:
ಕಾವ್ಯ-ಕೃಷಿ
Sorry for the inconvenience.
Poem ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Poem ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಗುರುವಾರ, ಆಗಸ್ಟ್ 14, 2008
ಆ ದಿನಗಳು....
ಸಿಡಿಲೊಡೆದು ಪಳೆಯುಳಿದ
ಇಟ್ಟಿಗೆಗೂಡಲೊಂದು
ಚಾ ದುಖಾನು
ಹೋದ ತಿಂಗಳ
ಪ್ರಜಾಮತದ ಮುಖಪುಟದಿ
ಸುಮಲತಾಳ ಹುಸಿನಗು
ಪಟ್ಟಿಗಾಜಿನ ಲೋಟದ ತಳದಲಿ
ನೀರ್ಕಾಪಿ,
ದವಡೆಯಾಡಿಸಲು ಒಣಕಲು ಬನ್ ಒಂದು
ಮನಸಿನಾಳದ ಕೊರಗು,ಲೋಕಾರೂಢಿ ಚಿಂತೆ
ಎಲ್ಲವೂ ಬ್ರಿಸ್ಟಲ್ ಸಿಗರೇಟಿನ
ಹೊಗೆಯಾಗಿ ಗಾಳಿಯಲಿ ಲೀನ
ಮೂಲೆಮೂಲೆಯ ಜನ್ಮ ಜಾಲಾಡಿ
ಮುದಿರೆಲೆಯ ಗತಿಕಾಣಿಸಿದ
ಉದಯವಾಣಿ ಪತ್ರಿಕೆಯೊಂದು
ಬೆಳಗಿಂದ ಕೂತು ತಲೆಕೆರೆದು ಕುರಮಾಡಿ ಮುಗಿಸಿದ
ಕಾಪಿ-ಬನ್ನು-ಇಡ್ಲಿ-ಮಸಾಲ್ ವಡೆ-ಚಿತ್ರಾನ್ನ-ಸಿಗರೇಟಿನ
ಒಟ್ಟು ಮೊತ್ತ ಇಪ್ಪತ್ತು ರುಪಾಯಿ!!
ಏನಾದರೇನು?
ಗೋರ್ಬಚೇವನಿಗಾಗಲೀ
ಬುಶ್ಶಪ್ಪನಿಗಾಗಲಿ ಮೋಕ್ಷವಿಲ್ಲ,
ಕುಂತಿ ಮಕ್ಕಳಿಗೆ ರಾಜ್ಯವಿಲ್ಲ!
ಸೋಮವಾರ, ಜುಲೈ 14, 2008
ದುರಾದೃಷ್ಟ
ಗುಡಿಸಲು ತುಂಬಾ
ಮಸಿ ಹಿಡಿದು ಮುಕ್ಕಾದ
ಇಂಡಾಲಿಯಂ
ಪಾತ್ರೆಗಳ ಸದ್ದು-ಗದ್ದಲ
ಹಗಲಿಡೀ ನಿದ್ದೆಯಿಲ್ಲ
ಕುಡಿದ ನಶೆ : ಆರಕ್ಕೇರದು ಮೂರಕ್ಕಿಳಿಯದು
ಪಾಪ!
ಹರಕು ಚಾಪೆ ಕಾಲಿಗೂ ಸಾಲದು
ತವರ ಪಾಲಾದ ಹಿರಿಮಗಳ,
ಮೇಜುವಾನಿ ಮಾಡುವ ತಾಯಿಯ
ಜೋಡಿ
ಎಕ್ಕಡಕ್ಕೆ ಚುಚ್ಚಿಕೊಂಡ ಮೊಂಡು ಮೊಳೆ!
ಮೂಲೆಸೇರಿ ಹೇನು-ಸೀರು ಕುಕ್ಕುವ ನೆಪದಿ
ಕಂದಮ್ಮಗಳ ಮೇಲೆ ತನ್ನೆಲ್ಲ
ಕೋಪ-ತಾಪ
ತೀರಿಸಿಕೊಳ್ಳುವ ಗಂಡ ಸತ್ತ-ಹಿರಿಸೊಸೆ
ಮಾತೆತ್ತಿದರೆ ಸಾಕು
ಸೋರುವ ಮೂಗನೂ ಸೀಟದೆ
ಆಕಾಶ-ಭೂಮಿ
ಒಂದು ಮಾಡುವ ಮೊಮ್ಮಕ್ಕಳ ಹಿಂಡು!
ಗುಡ್ಲು ತೆಗೆದು ಹೊರಗೆ ಬಿಟ್ಟ ಕೋಳಿ ಪಿಳ್ಳೆಗಳೂ,
ಮೂಲೆ ಸೇರಿ ಬೂದಿಬಿಸಿಗೆ ಮೈಯೊಡ್ಡಿ ಮಲಗಿದ್ದ
ಮುದಿನಾಯಿ
ಹತ್ತದು ಹರಿಯದು;
ದಿನದೂಡಿ,ಸಂಜೆ ಮಾಡಿ
ಅರವತ್ತರೆರಡಷ್ಟರನ್ನು ಕಣ್ಣು ಕಿರಿದುಮಾಡಿ
ನೇರ
ಗಂಟಲಿಗೆ ಸುರಿದುಕೊಂಡು ಕೆಲಸಕ್ಕೆ ಬಂದಾಯ್ತು
ಮಫ್ಲರ್ ಸುತ್ತಿದ್ದ ವಾಚ್‍ಮನ್ ರಂಗಯ್ಯನಿಗೆ
ಇಂದೇ ಅತಿನಿದ್ದೆ,ಕನ್ನ ಕೊರೆದು ಮನೆ ದೋಚಿದರೂ
ಕಣ್ಣು
ಬಿಡಲಾಗದಷ್ಟು,ಸದ್ದಾದರೂ ಕೇಳಿಸದಷ್ಟು!
ಸೋಮವಾರ, ಜೂನ್ 16, 2008
ಕರುಣೆ
ಬಿಡದೆ ಸುರಿಯುತಿರುವ ಜಡಿ ಮಳೆ
ಮೋಡ ಮುಸುಕಿದ ವಾತಾವರಣ;
ಗೂಡಿಗೆ ಹೊರಟಿದ್ದ ಹಕ್ಕಿಗಳಾ ಹಿಂಡೊಂದು
ಕೊಂಬೆಯೊಂದರ ಮೇಲೆ ಕೂತು
ರೆಕ್ಕೆ ಬಡಿದು ಪುಕ್ಕ ಒಣಗಿಸುತಿವೆ
ಸುತ್ತಲಿನ ಗಿಡ-ಮರ-ಪೊದೆಗಳು
ಮಳೆನೀರಲಿ ಮಿಂದು ಒದ್ದೆ-ಮುದ್ದೆಯಾಗಿ
ಹಸಿರಿನಿಂದ ಕಂಗೊಳಿಸುತಿರೆ
ಹಕ್ಕಿ ಹಿಂಡು ಕೂತ ಆ ಒಣ-ಬೋಳು ಮರ
ಅಯ್ಯೋ ಪಾಪ, ಸತ್ತು ಹೋಗಿ ನೆಟ್ಟಗೆ ನಿಂತಿದೆ!
ಬುಧವಾರ, ಅಕ್ಟೋಬರ್ 3, 2007
ಕನವರಿಕೆ
ಡಾವಿಂಚಿ ಚಿತ್ರಿಸಿದ
ಮೊನಾಲಿಸಳ ನಗೆ,
ರವಿವರ್ಮ ಬರೆದ
ಹೆಂಗಳೆಯರ ಹಾಗೆ
ನನ್ನವಳ ಮುಖಾರವಿಂದವನೂ-
ಚಿತ್ರಿಸಿ,ಬಣ್ಣಗಳಿಂದ ಮೇಳೈಸಿ
ಅದಕ್ಕೊಪ್ಪುವ ಚಿನ್ನದ ಬಣ್ಣದ
ಚೌಕಟ್ಟೊಂದನ್ನು ಹುಡುಕಿ ತಂದೆ
ಮನದಾಳದ ಮನೆಯ
ಸ್ಮೃತಿಪಟಲದ ಗೋಡೆಗೆ
ತಗುಲಿ ಹಾಕೋಣವೆಂದರೆ
ನೆನಪುಗಳ ಮೊಳೆಯೊಂದೂ ಇರಲಿಲ್ಲ!